Today: Last Update:

ಮುಂಬೈದಾಳಿ: ಭಾರತ, ಬ್ರಿಟನ್‌, ಅಮೆರಿಕಕ್ಕೆ ಮೊದಲೇ ಗೊತ್ತಿತ್ತು!

Posted by Yeshwant

ನ್ಯೂಯಾರ್ಕ್‌: ಭಾರತದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 2008ರ ನವೆಂಬರ್‌ನಲ್ಲಿ ನಡೆದ ದಾಳಿ ಬಗ್ಗೆ ಬ್ರಿಟನ್‌, ಅಮೆರಿಕ ಹಾಗೂ ಭಾರತ ಅತ್ಯಾಧುನಿಕ ಸರ್ವೇಕ್ಷಣಾ ವಿಧಾನದ ಮೂಲಕ ಮಾಹಿತಿ ಸಂಗ್ರಹಿಸಿದ್ದವು. ಆದರೆ ಅವೆಲ್ಲವನ್ನೂ ಕ್ರೋಢೀಕರಿಸುವಲ್ಲಿ ವಿಫ‌ಲವಾಗುವ ಮೂಲಕ ದಾಳಿ ತಡೆಯದಂತೆ ನೋಡಿಕೊಳ್ಳುವಲ್ಲಿ ನಿಷ#ಲವಾಗಿದ್ದವು ಎಂಬ ವಿಚಾರ ಬೆಳಕಿಗೆ ಬಂದಿದೆ.

26/11 ಎಂದೂ ಕರೆಯಲಾಗುವ ಮುಂಬೈ ಮೇಲಿನ ದಾಳಿ ಪ್ರಕರಣದ ಸಂಚುಗಾರ, ಲಷ್ಕರ್‌ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ತಾಂತ್ರಿಕ ವಿಭಾಗದ ಮುಖ್ಯಸ್ಥ ಜರಾರ್‌ ಶಾನ ಆನ್‌ಲೈನ್‌ ಚಟುವಟಿಕೆಗಳ ಮೇಲೆ ಮೇಲೆ ಭಾರತ ಹಾಗೂ ಬ್ರಿಟನ್‌ನ ಗುಪ್ತಚರ ಸಂಸ್ಥೆಗಳು ತೀವ್ರ ನಿಗಾ ಇಟ್ಟಿದ್ದವು. ಆದರೆ ಅಲ್ಲಿ ಕೆಲವೊಂದು ಮಾಹಿತಿಯನ್ನು ಜೋಡಣೆ ಮಾಡಲು ವಿಫ‌ಲವಾದವು. ಅಷ್ಟರಲ್ಲಿ ಮುಂಬೈ ದಾಳಿ ನಡೆದು, 166 ಮಂದಿ ಪ್ರಾಣ ಕಳೆದುಕೊಳ್ಳುವಂತಾಯಿತು ಎಂದು ನ್ಯೂಯಾರ್ಕ್‌ ಟೈಮ್ಸ್‌, ಪ್ರೊಪಬ್ಲಿಕಾ ಹಾಗೂ ಪಿಬಿಎಸ್‌ ಫ್ರಂಟ್‌ಲೆçನ್‌ ಸುದೀರ್ಘ‌ವಾದ ವರದಿ ಪ್ರಕಟಿಸಿವೆ.

2008ರ ಆರಂಭದಲ್ಲಿ ಜರಾರ್‌ ಶಾ ಪಾಕಿಸ್ತಾನದ ಉತ್ತರ ಪ್ರರ್ವತ ಪ್ರದೇಶಗಳಿಂದ ಅರಬ್ಬಿ ಸಮುದ್ರದ ಬಳಿಯ ಸುರಕ್ಷಿತ ಅಡುಗುತಾಣಕ್ಕೆ ಸೇರಿಕೊಂಡಿದ್ದ. ಅಲ್ಲಿಂದಲೇ ಮುಂಬೈ ಮೇಲಿನ ದಾಳಿಗೆ ಸಂಚು ರೂಪಿಸಲು ಆರಂಭಿಸಿದ್ದ.

ಸೆಪ್ಟೆಂಬರ್‌ ಹೊತ್ತಿಗೆ ಆತನ ಆನ್‌ಲೈನ್‌ ಚಟುವಟಿಕೆ ಗಳು ಅಂದರೆ ಇಂಟರ್ನೆಟ್‌ನಲ್ಲಿ ಜರಾರ್‌ ನಡೆಸುವ ಶೋಧ, ಕಳುಹಿಸುವ ಸಂದೇಶಗಳ ಮೇಲೆ ಬ್ರಿಟನ್‌ ತೀವ್ರ ಕಣ್ಣಿಟ್ಟಿತ್ತು. ಆದರೆ ಇದು ಜರಾರ್‌ಗೆ ಗೊತ್ತಿರಲಿಲ್ಲ. ಇದೇ ವೇಳೆ ಭಾರತೀಯ ಗುಪ್ತಚರ ಸಂಸ್ಥೆಗಳು ಕೂಡ ಆತನ ಮೇಲೆ ಹದ್ದುಗಣ್ಣಿಟ್ಟಿದ್ದವು.ಇವೆರಡೂ ರಾಷ್ಟ್ರಗಳು ಜರಾರ್‌ ಮೇಲೆ ನಿಗಾ ಇಟ್ಟಿರುವ ವಿಷಯ ತಿಳಿಯದ ಅಮೆರಿಕ ಕೂಡ ಜರಾರ್‌ ಚಟುವಟಿಕೆ ಗ್ರಹಿಸಿ ಹಲವು ಮಾಹಿತಿ ಸಂಗ್ರಹಿಸಿತ್ತು ಎಂದು ವರದಿ ತಿಳಿಸಿದೆ. ಮೂರೂ ರಾಷ್ಟ್ರಗಳು ಮಾಹಿತಿ ಸಂಗ್ರಹಿಸಿದ್ದರೂ ಕ್ರೋಢೀಕರಿಸುವಲ್ಲಿ ವಿಫ‌ಲವಾದವು. ಗುಂಡಿನ ಚಕಮಕಿ ಆರಂಭವಾದ ಬಳಿಕವಷ್ಟೇ ಹಂಚಿಕೆಗೆ ಮುಂದಾದವು ಎಂದು ವರದಿ ತಿಳಿಸಿದೆ. ಅಲ್ಲದೆ ಮುಂಬೈ ಮೇಲಿನ ದಾಳಿಗೂ ಮುನ್ನ ಹಲವಾರು ಎಚ್ಚರಿಕೆಗಳನ್ನು ಅಮೆರಿಕದ ಸಿಐಎ ಭಾರತಕ್ಕೆ ನೀಡಿತ್ತು ಎಂದು ಹೇಳಿದೆ.

26/11 ಉಗ್ರರ ನಿಯಂತ್ರಣಕ್ಕೆ ಭಾರತೀಯನ ಹೆಸರಲ್ಲಿ ಫೋನ್‌

ನ್ಯೂಯಾರ್ಕ್‌: 2008ರ ನವೆಂಬರ್‌ನಲ್ಲಿ ಮುಂಬೈ ಮೇಲೆ ಎರಗಿದ ಉಗ್ರರನ್ನು ದೂರವಾಣಿ ಮೂಲಕ ನಿಯಂತ್ರಿಸಲು ಲಷ್ಕರ್‌ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ನಿಯಂತ್ರಕರು ಭಾರತೀಯ ಉದ್ಯಮಿ ಹೆಸರಲ್ಲಿ 'ವಾಯ್ಸ ಓವರ್‌ ಇಂಟರ್ನೆಟ್‌ ಫೋನ್‌ ಸೇವೆ' ಪಡೆದಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ.

ದೂರವಾಣಿ ಸೇವೆಗಳ ಮರು ಮಾರಾಟಗಾರ ಖರಕ್‌ ಸಿಂಗ್‌ ಎಂಬ ಸುಳ್ಳು ಹೆಸರಿನಲ್ಲಿ ಲಷ್ಕರ್‌ ಸಂಘಟನೆಯಲ್ಲಿರುವ ಕಂಪ್ಯೂಟರ್‌ ಪರಿಣತ ಜರಾರ್‌ ಶಾ (30) ಈ ಫೋನ್‌ ಸೇವೆಯನ್ನು ಪಡೆದಿದ್ದ. ಅಲ್ಲದೆ ತಾನು ಮುಂಬೈನಲ್ಲಿ ವಾಸಿಸುತ್ತಿರುವುದಾಗಿಯೂ ಬಿಂಬಿಸಿಕೊಂಡಿದ್ದ ಎಂದು ಅಮೆರಿಕದ ನ್ಯೂಯಾರ್ಕ್‌ ಟೈಮ್ಸ್‌, ಪ್ರೊಪಬ್ಲಿಕಾ ಹಾಗೂ ಪಿಬಿಎಸ್‌ ಫ್ರಂಟ್‌ಲೆçನ್‌ ಮಾಧ್ಯಮ ಸಂಸ್ಥೆಗಳು ಸುದೀರ್ಘ‌ ತನಿಖಾ ವರದಿ ಪ್ರಕಟಿಸಿವೆ. ಉಗ್ರರಿಗೆ ಪಾಕಿಸ್ತಾನದಿಂದ ಸೂಚನೆ ಬರುತ್ತಿದೆ ಎಂಬುದು ಗೊತ್ತಾಗದಿರಲಿ ಎಂಬ ಕಾರಣಕ್ಕೆ ಇಂಟರ್ನೆಟ್‌ ಫೋನ್‌ ಸೇವೆ ಪಡೆಯಲಾಗಿತ್ತು. ಆಸ್ಟ್ರಿಯಾ ಹಾಗೂ ನ್ಯೂಜೆರ್ಸಿಯಿಂದ ಸಂದೇಶ ರವಾನೆಯಾಗುತ್ತಿದೆ ಎಂದು ತನಿಖಾ ಸಂಸ್ಥೆಗಳನ್ನು ದಾರಿ ತಪ್ಪಿಸುವ ಉದ್ದೇಶ ಆತನದಾಗಿತ್ತು ಎಂದು ವರದಿ ತಿಳಿಸಿದೆ. ಈ ಫೋನ್‌ ಸೇವೆಗೆ ನ್ಯೂಜೆರ್ಸಿಯ ಕಂಪನಿ ದರ ಹೇಳಿದಾಗ, 'ಇದನ್ನು ನಾನು ಮೊದಲ ಬಾರಿ ಬಳಸುತ್ತಿಲ್ಲ. ಎರಡು ವರ್ಷದಿಂದ ಉಪಯೋಗಿಸುತ್ತಿದ್ದೇನೆ' ಎಂದು ನಡುಗುವ ದನಿಯಲ್ಲಿ ತಿಳಿಸಿದ್ದ. ಫೋನ್‌ ಸೇವೆ ಪಡೆದಿದ್ದರೂ ಯಾವುದೇ ಕರೆ ವಿನಿಮಯವಾಗುತ್ತಿಲ್ಲ ಎಂದು ಸೇವೆ ನೀಡಿದ ನ್ಯೂಜೆರ್ಸಿ ಕಂಪನಿ ಜರಾರ್‌ನನ್ನು ಸಂಪರ್ಕಿಸಿ ದೂರಿತ್ತು. 'ಸರ್‌, ಮಾಸಾಂತ್ಯಕ್ಕೆ ಶುರುವಾಗಲಿದೆ' ಎಂದು ಮುಂಬೈ ದಾಳಿಯ ಸುಳಿವು ನೀಡಿದ್ದ ಎಂದು ವರದಿಯಲ್ಲಿ ವಿವರಿಸಲಾಗಿದೆ.

Tags:
Source: Udayavani

comments

    Be the first one to write a comment for this news.

leave a comment

The content of this field is kept private and will not be shown publicly.

(required)
(required)
A- A A+